ವಾಸುದೇವನು ಪ್ರಾಣಮುಖ ತ
ತ್ವೇಶರಿಂದಲಿ ಸೇವೆ ಕೈಕೊಳು
ತೀ ಶರೀರದೊಳಿಪ್ಪ ಮುವತ್ತಾರು ಸಾಹಸ್ರ
ಈ ಸುನಾಡಿಗಳೊಳಗೆ ಶ್ರೀ ಭೂ
ಮೀ ಸಮೇತ ವಿಹಾರಗೈವ ಪ
ರೇಶನಮಲಸುಮೂರ್ತಿಗಳ ಚಿಂತಿಸುತ ಹಿಗ್ಗುತಿರು  ||೧||

ಚರಣಗಳೊಳಗಿಹ ನಾಡಿಗಳು ಗ
ನ್ನೆರಡು ಸಾವಿರ ಮಧ್ಯ ದೇಹ ದೊ
ಳಿರುತಿಹವು ಹದಿನಾಲ್ಕು ಬಾಹುಗಳೊಳಗೆ ಈವೆರಡು |
ಶಿರದೊಳಾರು ಸಾಹಸ್ರ ಚಿಂತಿಸಿ
ಇರುಳು ಹಗಲಭಿಮಾನಿ ದಿವಿಜರ
ನರಿತುಪಾಸನೆ ಗೈವರಿಳೆಯೊಳು ಸ್ವರ್ಗವಾಸಿಗಳು  ||೨||

ಬೃಹತೀ ನಾಮಕ ವಾಸುದೇವನು
ವಹಿಸಿ ಪುಂಸ್ತ್ರೀರೂಪಗಳ ದೋಷ ವಿ
ರಹಿತ ಎಪ್ಪತ್ತೆರಡು ಸಾವಿರ ನಾಡಿಗಳೊಳಗಿದ್ದು |
ದ್ರುಹಿಣ ಮೊದಲಾದಮರಗಣ ಸ
ನ್ಮಹಿತ ಸರ್ವ ಪ್ರಾಣಿಗಳ ಮಹ
ಮಹಿಮ ಸಂತೈಸುವನು ಸಂತತ ಪರಮ ಕರುಣಾಳು  ||೩||

ನೂರು ವರುಷಕೆ ದಿವಸ ಮೂವ
ತ್ತಾರು ಸಾವಿರವಹವು ನಾಡೀ ಶ
ರೀರದೊಳಗಿನಿತಿಹವು ಎಂದರಿತೊಂದು ದಿವಸದಲಿ |
ಸೂರಿಗಳ ಸತ್ಕರಿಸಿದವ ಪ್ರತಿ
ವಾರದಲಿ ದಂಪತಿಗಳರ್ಚನೆ
ತಾ ರಚಿಸಿದವ ಸತ್ಯ ಸಂಶಯವಿಲ್ಲವೆಂದೆಂದು  ||೪||

ಚತುರವಿಂಶತಿ ತತ್ವಗಳು ತ
ತ್ಪತಿಗಳೆನಿಸುವ ಬ್ರಹ್ಮಮುಖ ದೇ
ವತೆಗಳನುದಿನ ಪ್ರತಿ ಪ್ರತಿನಾಡಿಗಳೊಲಿರುತಿದ್ದು|
ಚತುರದಶ ಲೋಕದೊಳು ಜೀವ
ಪ್ರತತಿಗಳ ಸಂರಕ್ಷಿಸುವ ಶಾ
ಶ್ವತನ ತತ್ತಸ್ಥಾನದಲಿ ನೋಡತಲೆ ಮೋದಿಪರು  ||೫||

ಸತ್ಯ ಸಂಕಲ್ಪನು ಸದಾ ಎ
ಪ್ಪತ್ತೆರಡು ಸಾಹಸ್ರದೊಳು ಮೂ
ವತ್ತು ನಾಲಕು ಲಕ್ಷದೈವತ್ತಾರು ಸಾಹಸ್ರ|
ಚಿತ್ತ್ರಕೃತಿ ಒಡಗೂಡಿ ಪರಮ ಸು
ನಿತ್ಯ ಮಂಗಳ ಮೂರ್ತಿ ಭಕ್ತರ
ತೆತ್ತಿಗನು ತಾನಾಗಿ ಸರ್ವತ್ರದಲಿ ಸಂತೈಪ  ||೬||

ಮಣಿಗಳೊಳಗಿಹ ಸೂತ್ರದಂದಿ
ಪ್ರಣವ ಪಾದ್ಯನು ಸರ್ವ ಚೇತನ
ಗಣದೊಳಿದ್ದನವರತ ಸಂತೈಸುವನು ತನ್ನವರ |
ಪ್ರಣತ ಕಾಮದ ಭಕ್ತ ಚಿಂತಾ
ಮಣಿ ಚಿದಾನಂದೈಕ ದೇಹನು
ಅಣು ಮಹದ್ಗತನಲ್ಪರೋಪಾದಿಯಲಿ ನೆಲೆಸಿಪ್ಪ  ||7||

ಈ ಸುಷಮ್ನಾದ್ಯಖಿಳ ನಾಡೀ
ಕೋಶ ನಾಭಿ ಮೂಲದಲಿ ವೃಷ
ಣಾಸನದ ಮಧ್ಯದಲಿ ಇಪ್ಪದು ತುಂದಿ ನಾಮದಲಿ |
ಆ ಸರೋಜಾಸನ ಮುಖರು ಮೂ
ಲೇಶನಾನಂದಾದಿ ಸುಗುಣೋ
ಪಾಸನೆಯ ಗೈಯುತಲಿ ದೇಹಗಳೊಳಗೆ ಇರುತಿಹನು  ||೮||

ಸೂರಿಗಳು ಚಿತ್ತೈಸುವುದು ಭಾ
ಗೀರಥಿಯೆ ಮೊದಲಾದ ತೀರ್ಥಗ
ಳೀರಧಿಕ ಎಪ್ಪತ್ತು ಸಾವಿರ ನಾಡಿಗಳೊಳಿಹವು |
ಈ ರಹಸ್ಯವ ಅಲ್ಪ ಜನರಿಗೆ
ತೋರಿ ಪೇಳದೆ ನಾಡಿ ನದಿಯೊಳು
ಧೀರರನುದಿನ ಮಜ್ಜನವ ಮಾಡುತಲಿ ಸುಖಿಸುವರು ||೯||

ತಿಳಿವುದೀ ದೇಹದೊಳಗಿಹ ಎಡ
ಬಲದ ನಾಡಿಗಳೊಳಗೆ ದಿವಿಜರು
ಜಲಜ ಸಂಭವ ವಾಯ ವಾಣ್ಯಾದಿಗಳು ಬಲದಲ್ಲಿ |
ಎಲರುಣಿಗ ವಿಹಗೇಂದ್ರ ಚಳಿವೆ
ಟ್ಟಳಿಯ ಷಣ್ಮಹಿಷಿಯರು ವಾರುಣಿ
ಕುಲಿಶಧರ ಕಾಮಾದಿಗಳು ಎಡಭಾಗದೊಳಗಿಹರು  ||೧೦||

ಇಕ್ಕೆಲದೊಳಿಹ ನಾಡಿಯೊಳು ದೇ
ವರ್ಕಳಿಂದೊಡನಾಡುತಲಿ ಪೊಂ
ಬಕ್ಕಿ ದೇರನು ಜೀವರಧಿಕಾರಾನುಸಾರದಲಿ |
ತಕ್ಕ ಸಾಧನ ಮಾಡಿ ಮಾಡಿಸು
ತಕ್ಕರದಿ ಸಂತೈಪ ಭಕ್ತರ
ದಕ್ಕಗೊಡನಸುರರ್ಗೆ ಸತ್ಪುಣ್ಯಗಳನಪಹರಿಪ  ||೧೧||

ತುಂದಿವಿಡಿದಾ ಶಿರದ ಪರಿಯಂ
ತೊಂದೆ ವ್ಯಾಪಿಸಿ ಇಹುದು ತಾವರೆ
ಗಂದನಿಹನದರೊಳಗೆ ಅದಕೀರೈದು ಶಾಖೆಗಳು |
ಒಂದಧಿಕ ದಶಕರಣದೊಳು ಸಂ
ಬಂಧ ಗೈದಿಹವಲ್ಲಿ ರವಿ ಶಶಿ
ಸಿಂಧು ನಾಸತ್ಯಾದಿಗಳು ನೆಲೆಗೊಂಡಿಹರು ಸತತ  ||೧೨||

ಪೊಕ್ಕಳವಿಡಿದೊಂದೆ ನಾಡಿಯು
ಸುಕ್ಕದಲೆ ಧಾರಾಳ ರೂಪದಿ
ಸಿಕ್ಕಿಹುವು ನಡು ದೇಹದೊಳಗೆ ಸುಷಮ್ನನಾಮದಲಿ |
ರಕ್ಕಸರನೊಳಪೊಗಗೊಡದೆ ದಶ
ದಿಕ್ಕಿನೊಳಗೆ ಸಮೀರ ದೇವನು
ಲೆಕ್ಕಿಸದೆ ಮತ್ತೊಬ್ಬರನು ಸಂಚರಿಪ ದೇಹದೊಳು  ||೧೩||

ಇನಿತು ನಾಡೀ ಶಾಖೆಗಳು ಈ
ತನುವಿನೊಳಗಿಹವೆಂದು ಏಕಾ
ತ್ಮನು ದ್ವಿಸಪ್ತತಿ ಸಾವಿರಾತ್ಮಕನಾಗಿ ನಾಡಿಯೊಳು |
ವನಿತೆಯಿಂದೊಡಗೂಡಿ ನಾರಾ
ಯಣ ದಿವಾರಾತ್ರಿಯೊಳಗೀಪರಿ
ವನಜಜಾಂಡದೊಳಖಿಳ ಜೀವರೊಳಿದ್ದು ಮೋಹಿಸುವ  ||೧೪||

ದಿನದಿನದಿ ವರ್ಧಿಸುವ ಕುಮುದಾ
ಪ್ತನ ಮಯೂಖದ ಸೊಬಗು ಗತಲೋ
ಚನ ವಿಲೋಕಿಸಿ ಮೋದ ಪಡಬಲ್ಲನೆ ನಿರಂತರದಿ |
ಕುನರಗೀ ಸುಕಥಾಮೃತ ಭೋ
ಜನದ ಸುಖ ದೊರಕುವುದೇ ಲಕ್ಷ್ಮೀ
ಮನೋಹರನ ಸದ್ಗುಣವ ಕೀರ್ತಿಪ ಭಕುತಗಲ್ಲದಲೆ  ||೧೫|| 

ಈ ತನುವಿನೊಳಗಿಹವು ಓತ
ಪ್ರೋತರೂಪದಿ ನಾಡಿಗಳು ಪುರು
ಹೂತ ಮುಖರಲ್ಲಿಹರು ತಮ್ಮಿಂದಧಿಕರೊಡಗೂಡಿ |
ಭೀತಿಗೊಳಿಸುತ ದಾನವರ ಸಂ
ಧಾತನಾಮಕ ಹರಿಯ ಗುಣಸಂ
ಪ್ರೀತಿಯಲಿ ಸದುಪಾಸನೆಯ ಗೈವುತಲಿ ಮೋದಿಪರು  ||೧೬||

ಜಲಟ ಕುಕ್ಕುಟ ಖೇಟ ಜೀವರ
ಕಳೇವರಗಳೊಳಿದ್ದು ಕಾಣಿಸಿ
ಕೊಳದೆ ತತ್ತದ್ರೂಪ ನಾಮಗಳಿಂದ ಕರೆಸುತಲಿ |
ಜಲರುಹೇಕ್ಷಣ ವಿವಿಧ ಕರ್ಮ
ಗಳ ನಿರಂತರ ಮಾಡಿ ಮಾಡಿಸಿ ತತ್ತ
ತ್ಫಲಗಳುಣ್ಣದೆ ಸಂಚರಿಸುವನು ನಿತ್ಯ ಸುಖಪೂರ್ಣ  ||೧೭||

ತಿಳಿದುಪಾಸನೆಗೈವುತೀಪರಿ
ಮಲಿನನಂತಿರು ದುರ್ಜನರ ಕಂ
ಗಳಿಗೆ ಗೋಚರಿಸದೆ ವಿಪಶ್ಚಿತರೊಡನೆ ಗರ್ವಿಸದೆ |
ಮಳೆ ಬಿಸಿಲು ಹಸಿ ತೃಷೆ ಜಯಾಪಜಯ
ಖಳರ ನಿಂದಾನಿಂದೆ ಭಯಗಳಿ
ಗಳುಕದಲೆ ಮದ್ದಾನೆಯಂದದಿ ಚರಿಸು ಧರೆಯೊಳಗೆ  ||೧೮||

ಕಾನನ ಗ್ರಾಮಸ್ಥ ಸರ್ವ
ಪ್ರಾಣಿಗಳು ಪ್ರತಿದಿವಸದಲಿ ಏ
ನೇನು ಮಾಡುವ ಕರ್ಮಗಳು ಹರಿ ಪೂಜೆಯೆಂದರಿದು |
ಧೇನಿಸುತ ಸದ್ಭಕ್ತಿಯಲಿ ಪವ
ಮಾನ ಮುಖ ದೇವಾಂತರಾತ್ಮಕ
ಶ್ರೀನಿವಾಸನಿಗರ್ಪಿಸುತ ಮೋದಿಸುತ ನಲಿವುತಿರು  ||೧೯||

ನೋಕನೀಯನು ಲೋಕದೊಳು ಶುನಿ
ಸೂಕರಾದಿಗಳೊಳಗೆ ನೆಲೆಸಿ
ದ್ದೇಕಮೇವಾದ್ವಿತೀಯ ಬಹುರೂಪಾಹ್ವಯಗಳಿಂದ |
ತಾ ಕರೆಸುತೊಳಗಿದ್ದು ತಿಳಿಸದೆ
ಶ್ರೀ ಕಮಲಭವ ಮುಖ್ಯ ಸಕಲದಿ
ವೌಕಸಗಣಾರಾಧ್ಯ ಕೈಕೊಂಡನುದಿನದಿ ಪೊರೆವ  ||೨೦||

ಇನಿತುಪಾಸನೆ ಗೈಯುತಿಹ ಸ
ಜ್ಜನರು ಸಂಸಾರದಲಿ ಪ್ರತಿಪ್ರತಿ
ದಿನಗಳಲಿ ಏನೇನು ಮಾಡುವುದೆಲ್ಲ ಹರಿ ಪೂಜೆ |
ಎನಿಸಿಕೊಂಬುದು ಸತ್ಯವೀ ಮಾ
ತಿನಲಿ ಸಂಶಯ ಪಡುವ ನರನ
ಲ್ಪನು ಸುನಿಶ್ಚಯ ಬಾಹ್ಯ ಕರ್ಮವ ಮಾಡಿ ಫಲವೇನು ||೨೧||

ಭೋಗ್ಯ ಭೋಕ್ತೃಗಳೊಳಗೆ ಹರಿ ತಾ
ಭೋಗ್ಯ ಭೋಕ್ತನು ಎನಿಸಿ ಯೋಗ್ಯಾ
ಯೋಗ್ಯ ರಸಗಳ ದೇವದಾನವಗಣಕೆ ಉಣಿಸುವನು |
ಭಾಗ್ಯನಿಧಿ ಭಕ್ತರಿಗೆ ಸದ್ವೈ
ರಾಗ್ಯ ಭಕ್ತಿ ಜ್ಞಾನ ವೀವಾ
ಯೋಗ್ಯರಿಗೆ ದ್ವೇಷಾದಿಗಳ ತನ್ನಲ್ಲೆ ಕೊಡುತಿಪ್ಪ ||೨೨||

ಈ ಚತುರ್ದಶ   ಭುವನದೊಳಗೆ ಚ
ರಾಚರಾತ್ಮಕ ಜೀವರಲ್ಲಿ ವಿ
ರೋಚನಾತ್ಮಜ ವಂಚಕನು ನೆಲೆಸಿದ್ದು ದಿನ ದಿನದಿ |
ಯಾಚಕನು ಎಂದೆನಿಸಿಕೊಂಬ ಮ
ರೀ ಚಿದಮನ ಸುಹಂಸರೂಪಿ ನಿ
ಷೇಚಕಾಗಹ್ವಯನಾಗಿ ಜನರಭಿಲಾಷೆ ಪೂರೈಪ  ||೨೩||

ಅನ್ನದನ್ನಾದನ್ನ ಮಯ ಸವಯ
ಮನ್ನ ಬ್ರಹ್ಮಾದ್ಯಖಿಳ ಚೇತನ
ಕನ್ನ ಕಲ್ಪಕನಾಹ ನನಿರುದ್ಧಾದಿ ರೂಪದಲಿ |
ಅನ್ಯರನಪೇಕ್ಷಿಸದೆ ಗುಣ ಕಾ
ರುಣ್ಯ ಸಾಗರ ಸೃಷ್ಟಿಸುವನು ಹಿ
ರಣ್ಯಗರ್ಭನೊಳಿದ್ದು ಪಾಲಿಸುವನು ಜಗತ್ರಯವ  ||೨೪||

ತ್ರಿಪದ ತ್ರಿದಶಾಧ್ಯಕ್ಷ ತ್ರಿಸ್ಥ
ತ್ರಿಪಥ ಗಾಮಿನೀಪಿನ ತ್ರಿವಿಕ್ರಮ
ಕೃಪಣ ವತ್ಸಲ ಕುವಲಯದಳ ಶ್ಯಾಮ ನಿಸ್ಸೀಮ |
ಅಪರಿಮಿತ ಚಿತ್ಸುಖ ಗುಣಾತ್ಮಕ
ವಪುಷ ವೈಕುಂಠಾದಿ ಲೋಕಾ
ಧಿಪ ತ್ರಯಿಮಯ ತನ್ನವರ ನಿಷ್ಕಪಟದಿಂ ಪೊರೆವ  ||೨೫||